ಕುಜ ದೋಷ ಮತ್ತು ವಿವಾಹೋಪಯುಕ್ತ ಕೋಷ್ಟಕಗಳು :
ವಧು–ವರರ ಜನ್ಮ ಲಗ್ನ ಚಂದ್ರ ಮತ್ತು ಶುಕ್ರರಿಂದ ೧,೨,೪,೭,೮,೧೨ ಸ್ಥಾನಗಳಲ್ಲಿ (ರವಿ,ಕುಜ,ಶನಿ,ರಾಹು,ಕೇತು)ಪಾಪಗ್ರಹರಿದ್ದರೆ ದೋಷವೆಂತ ಗ್ರಹಿಸಬೇಕು.ಪಾಪಗ್ರಹರ ಪೈಕಿ ಕುಜದೋಷವು ಬಲಿಷ್ಠವಾಗುತ್ತದೆ. ಕರ್ಕಾಟಕ, ಸಿಂಹ, ಧನು,ಮಕರ, ಮೀನ ಲಗ್ನ ಮತ್ತು ರಾಶಿಗಳಾದರೆ ಕುಜ ದೋಷವು ಗಣ್ಯವಾಗುವುದಿಲ್ಲ ಮಾತ್ರವಲ್ಲ ಜನ್ಮ ಲಗ್ನದಿಂದ ೯ ನೆ ಮನೆಯಲ್ಲಿ ಶುಭಗ್ರಹರಿದ್ದರು (ಚಂದ್ರ,ಗುರು,ಶುಕ್ರರು)ಗಣ್ಯವಾಗುವುದಿಲ್ಲ. ಇತರ ಗ್ರಹರ ಬಲಾಬಲಗಳಿಂದ ಹೆಚ್ಚು ಕಡಿಮೆಯಾಗುವುದನ್ನು ಚಿಂತಿಸಬೇಕಾಗುತ್ತದೆ. ವರನ ಜಾತಕದಲ್ಲಿ ಬಲಾಧಿಕ್ಯವಿದ್ದರೆ ಅದು ಗಣ್ಯವಾಗುವುದಿಲ್ಲ.
ಕೋಷ್ಟಕಗಳನ್ನು ನೋಡುವಾಗ ವಧು–ವರರ ಜನ್ಮ ನಕ್ಷತ್ರ – ರಾಶಿಗಳಿಂದ ನಾಮ ನಕ್ಷತ್ರ –ರಾಶಿಗಳಿಂದ,ವಧೂವರರ ನಕ್ಷತ್ರ–ರಾಶಿಗಳಿಗೆ ಸರಿಯಾಗಿ ನೋಡಬೇಕು.
೧ . ವರ್ಣಕೂಟ: ಹಿಂದೆ ರಾಶಿ ಪ್ರಕರಣದಲ್ಲಿ ಹೇಳಿದ ವಧು ವರರ ರಾಶಿಗಳು ಒಂದೇ ವರ್ಣವಾದರೂ ವಧೂ ವರ್ಣಕ್ಕಿಂತ ವರನ ವರ್ಣವು ಉತ್ತಮವಾದರೂ ಶುಭವೆಂದು ಗ್ರಹಿಸಬೇಕು ಇದರ ಗುಣ ೧
೨. ವಶ್ಯಕೂಟ : ಮೇಷಕ್ಕೆ–ಸಿಂಹ,ವೃಶ್ಚಿಕ; ವೃಷಭಕ್ಕೆ–ಕರ್ಕಾಟಕ, ತುಲಾ; ಮಿಥುನಕ್ಕೆ–ಕನ್ಯಾ, ಕರ್ಕಾಟಕಕ್ಕೆ–ವೃಶ್ಚಿಕ,ಧನು; ಸಿಂಹಕ್ಕೆ–ತುಲ,ಕನ್ಯಕ್ಕೆ–ಮಿಥುನ,ಮೀನಾ , ತುಲಾಕೆ–ಮಕರ ,ವೃಶ್ಚಿಕಕ್ಕೆ–ಕರ್ಕಾಟಕ,ಕನ್ಯಾ,ಧನುವಿಗೆ–ಮೀನ,ಮಕರಕ್ಕೆ–ಮೇಷ,ಕುಂಭ, ಕುಂಭಕ್ಕೆ–ಮೇಷ, ಮೀನಕ್ಕೆ–ಮಕರ ಹೀಗೆ ವಶ್ಯಕೂಟವಿರುವಲ್ಲಿ ಸ್ತ್ರೀ ರಾಶಿಗೆ ಪುರುಷ ರಾಶಿಯು ವಶ್ಯವಿರಬೇಕು ಇದಕ್ಕೆ ಗುಣ ೨
೩. ತಾರಾಕೂಟ : ವಧೂ ಜನ್ಮ ನಕ್ಷತ್ರವನ್ನು ಒಳಗೊಂಡು ವರನ ಜನ್ಮ ನಕ್ಷತ್ರದ ವರೆಗೆ ತಾರಾಬಲ ನೋಡುವ ಕ್ರಮದಂತೆ ೯ ರಿಂದ ಭಾಗಿಸಿ ಉಳಿದ ಶೇಷ ಸಂಖ್ಯೆ ೩ (ವಿಪತ್), ೫ (ಪ್ರತ್ಯರ), ೭(ವಧ)ತಾರೆಗಳು ವರ್ಜ್ಯವಾಗುತ್ತದೆ . ಇದಕ್ಕೆ ಗುಣ ೩.
೪. ಯೋನಿಕೂಟ : ವಧೂವರರ ಜನ್ಮನಕ್ಷತ್ರ ನಾಮ ನಕ್ಷತ್ರಗಳಿಗೆ ನಕ್ಷತ್ರ ಪ್ರಕರಣದಲ್ಲಿ ಕಾಣಿಸಿದಂತೆ ವೈರ ಯೋನಿ ಇರಕೂಡದು ಇದಕ್ಕೆ ಗುಣ ೪.
೫. ಗ್ರಹ ಮಿತ್ರತ್ವ ಕೋಷ್ಟಕ
ಗ್ರಹ | ಮಿತ್ರ | ಶತ್ರು | ಸಮ |
---|---|---|---|
ರವಿ | ಚಂದ್ರ,ಕುಜ,ಗುರು | ಶುಕ್ರ,ಶನಿ | ಬುಧ |
ಚಂದ್ರ | ರವಿ,ಬುಧ | — | ಕುಜ ಗುರು,ಶುಕ್ರ ಶನಿ |
ಕುಜ | ರವಿ,ಚಂದ್ರ,ಗುರು | ಬುಧ | ಶುಕ್ರ ಶನಿ |
ಬುಧ | ರವಿ,ಶುಕ್ರ | ಚಂದ್ರ | ಕುಜ ಗುರು ಶನಿ |
ಗುರು | ರವಿ,ಚಂದ್ರ,ಕುಜ | ಬುಧ,ಶುಕ್ರ | ಶನಿ |
ಶುಕ್ರ | ಬುಧ,ಶನಿ | ರವಿ,ಚಂದ್ರ | ಕುಜ ಗುರು |
ಶನಿ | ಬುಧ,ಶುಕ್ರ | ರವಿ,ಚಂದ್ರ,ಕುಜ | ಗುರು |
ವಧೂವರರ ರಾಶ್ಯಾಧಿಪತಿಗಳು ಅಥವಾ ಅಂಶಾಧಿಪತಿಗಳು ಮಿತ್ರರಾಗಿದ್ದರೆ ಉತ್ತಮ ಗುಣ ೫.ಸಮಮಿತ್ರರಾಗಿದ್ದರೆ ಮಧ್ಯಮಗುಣ ೩ . ಸಮಶತ್ರುಗಳಾಗಿದ್ದರೆ ಕನಿಷ್ಠ ಗುಣ ೧.ಶತ್ರು ಶತ್ರುಗಳೇ ಆಗಿದ್ದರೆ ತ್ಯಾಜ್ಯ . ಇದಕ್ಕೆ ಗುಣ ೦.
೬. ಗಣಕೂಟ: ನಕ್ಷತ್ರ ಪ್ರಕರಣದಲ್ಲಿ ಬರೆದ ಗಣಕೂಟಗಳ ಪೈಕಿ ವಧೂವರರ ಜನ್ಮ ನಕ್ಷತ್ರಗಳು, ನಾಮ ನಕ್ಷತ್ರಗಳು ಒಂದೇ ಗಣಕ್ಕೆ ಸೇರಿದವುಗಳಾದರೆ ಉತ್ತಮ ಗುಣ ೬. ದೇವ ಮನುಷ್ಯ ಗಣಗಳಾದರು ತೊಂದರೆ ಇಲ್ಲ ಗುಣ ೫. ದೇವ ರಾಕ್ಷಸವಾದರೆ ಮಧ್ಯಮ, ಗುಣ ೩. ಮನುಷ್ಯ ರಾಕ್ಷಸವಾದರೆ ಗುಣ ೧. ಸ್ತ್ರೀ ರಾಕ್ಷಸ ವಾದರೆ ತ್ಯಾಜ್ಯ. ಇದಕ್ಕೆ ಗುಣ ೦.
೭.ರಾಶಿಕೂಟ : ವಧು ಜನ್ಮ ರಾಶಿಯನ್ನು ಒಳಗೊಂಡು ವರನ ಜನ್ಮರಾಶಿಯು ೭ ನೇ ರಾಶಿಯನ್ನಾರಂಭಿಸಿ ಮುಂದೆ ಇರಬೇಕು. ಇದಕ್ಕೆ ಗುಣ ೭.
೮. ನಾಡಿಕೂಟ: ನಕ್ಷತ್ರ ಪ್ರಕರಣದಲ್ಲಿ ಕಾಣಿಸಿದ ವಧು ವರರ ನಾಡಿಗಳು ಒಂದೇ ಆಗಿರುವಲ್ಲಿ ತ್ಯಾಜ್ಯ ಗುಣ ೦. ನಾಡಿಗಳು ಬೇರೆಯಾಗಿರುವಲ್ಲಿನಾಡಿ ದೋಷವಿರುವುದಿಲ್ಲ.ಇದಕ್ಕೆ ಗುಣ ೮.
ಈ ಮೇಲಿನ ಎಲ್ಲ ಕೂಟಗಳಿಂದ ಒಟ್ಟಿಗೆ ೩೬ ಗುಣಗಳು . ಈ ಪೈಕಿ ೧೮ ಗುಣಗಳಿಗಿಂತ ಅಧಿಕವಾದಲ್ಲಿ ಸಂಘಟನೆಯು ಗ್ರಾಹ್ಯ. ೨೪ ರಿಂದ ಅಧಿಕವಿರುವಲ್ಲಿ ಉತ್ತಮ ಎಂದು ಗ್ರಹಿಸತಕ್ಕದ್ದು. ೧೮ ಕ್ಕಿಂತ ಕಡಿಮೆಯಾದಲ್ಲಿ ತ್ಯಾಜ್ಯವಾದರೂ ಮನಃ ಕೂಟ ಮತ್ತು ಪೂರ್ವಬಾಂಧವ್ಯ ಇತ್ಯಾದಿಗಳನ್ನು ಮತ್ತು ದೇಶಕಾಲ ಪರಿಸ್ಥಿತಿಯಲ್ಲಿ ಒಂದಂಶವನ್ನಾಗಿಟ್ಟುಕೊಂಡು ವಧೂವರರ ಜಾತಕಗಳ ಸಂಘಟನೆಯನ್ನು ಗ್ರಹಿಸಬೇಕು.
ಏಕನಕ್ಷತ್ರ ವಿಚಾರ ಏಕನಕ್ಷತ್ರಗಳ ಪೈಕಿ ಭರಣಿ , ರೋಹಿಣಿ , ಆರ್ದ್ರ, ಪುಷ್ಯ, ಆಶ್ಲೇಷ, ಮಖಾ, ಹಸ್ತ, ಜ್ಯೇಷ್ಟ, ಮೂಲ, ಪೂರ್ವಾಷಾಢ, ಧನಿಷ್ಠ, ಶತಭಿಷಾ, ಈ ೧೮ ನಕ್ಷತ್ರಗಳು ವರ್ಜ್ಯವಾಗಿವೆ.